ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿರುವ ಬಿಬಿಎಂಪಿ ಎಂತಹ ಕುಂಭಕರ್ಣ ನಿದ್ರೆಗೆ ಜಾರಿದೆ ಎಂದರೆ ಅದರಿಂದ ಈಗ ಯಾವುದೇ ಸಾರ್ವಜನಿಕ ಕೆಲಸವನ್ನು ಮಾಡಿಸಬೇಕಿದ್ದರೂ ಹೈಕೋರ್ಟ್ನ ಆದೇಶ ಎಂಬ ‘ಅಸ್ತ್ರ’ವೇ ಬೇಕಾಗಿದೆ. ಕೆಲವು ವಾರಗಳ ಹಿಂದೆಯಷ್ಟೆ ಜಾಹೀರಾತು ಫಲಕಗಳನ್ನು ತೆಗೆಸುವಂತೆ ಚಾಟಿ ಬೀಸಿದ್ದ ಮುಖ್ಯ ನ್ಯಾಯಮೂರ್ತಿ, ಈಗ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳ ಕಿವಿ ಹಿಂಡಿದ್ದಾರೆ. ಗುಂಡಿ ಮುಚ್ಚಲು ಪಾಲಿಕೆಗೆ ಗಡುವು ನೀಡಿದ್ದಲ್ಲದೆ, ಆ ಗಡುವಿನಲ್ಲಿ ನಗರದ ಎಲ್ಲ ರಸ್ತೆಗಳು ಸುಸ್ಥಿತಿಗೆ ಮರಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲನಾ ಆಯೋಗವನ್ನೂ ರಚಿಸಿದ್ದಾರೆ. ಸ್ಥಳೀಯ ಆಡಳಿತದ ಅಸಡ್ಡೆಯನ್ನು ಹೈಕೋರ್ಟ್ ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದು ಇದರಿಂದ ಸ್ಪಷ್ಟ. ಪ್ರತೀ ರಸ್ತೆಯೂ ಗುಂಡಿಮಯ ಆಗಿರುವುದು ಎದ್ದು ಕಾಣುತ್ತಿರುವಾಗ ಅಧಿಕಾರಿಗಳು, ‘ನಗರದಲ್ಲಿ ಇರುವುದು ನೂರಾರು ಗುಂಡಿಗಳು ಮಾತ್ರ’ ಎಂದು ಪ್ರತಿಪಾದಿಸುತ್ತಾ ಬಂದಿದ್ದು ಹಾಸ್ಯಾಸ್ಪದ. ಕೋರ್ಟ್ ಆದೇಶದಂತೆ 3–4 ದಿನಗಳಲ್ಲಿ ನಗರದ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚುವುದೇನೋ ಕಷ್ಟ. ಆದರೆ, ‘ಮಾಡಿದ್ದುಣ್ಣೋ ಮಹಾರಾಯ’ ಎನ್ನುವಂತೆ ಇದುವರೆಗೆ ಹೊಣೆಗೇಡಿತನ ತೋರಿದ ಅಧಿಕಾರಿಗಳು ಅದಕ್ಕೆ ತಕ್ಕ ‘ಶಿಕ್ಷೆ’ಯನ್ನು ಅನುಭವಿಸಬೇಕಾಗಿದೆ. ಯಾವುದೇ ರಸ್ತೆಗೆ ಟಾರು ಹಾಕುವ ಕಾಮಗಾರಿಯನ್ನು ಗುತ್ತಿಗೆ ಪಡೆದವರು, ಮೂರು ವರ್ಷಗಳವರೆಗೆ ಆ ರಸ್ತೆಯ ನಿರ್ವಹಣೆ ಹೊಣೆಯನ್ನೂ ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಗುತ್ತಿಗೆದಾರರಿಂದ ರಸ್ತೆಗಳ ನಿರ್ವಹಣೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಪಾಲಿಕೆ ಎಂಜಿನಿಯರ್ಗಳ ಜವಾಬ್ದಾರಿ. ರಸ್ತೆಗಳ ಇಂದಿನ ದುಃಸ್ಥಿತಿಗೆ ಇವರಿಬ್ಬರ ನಡುವಿನ ಅಪವಿತ್ರ ಮೈತ್ರಿಯೇ ಕಾರಣ. ರಸ್ತೆ ಇತಿಹಾಸ ನಿರ್ವಹಣೆ ಮಾಡದೆ, ಸರಿಯಾದ ದಾಖಲೆ ಇಡದೆ, ಮತ್ತೆ ಮತ್ತೆ ಅದೇ ರಸ್ತೆಗಳಿಗೆ ದುಡ್ಡು ಸುರಿಯಲಾಗುತ್ತಿದೆ ಎನ್ನುವಂತಹ ಆರೋಪಗಳಲ್ಲೂ ಹುರುಳಿದ್ದಂತಿದೆ. ಇಲ್ಲದಿದ್ದರೆ ಹತ್ತು ವರ್ಷಗಳಲ್ಲಿ ಪಾಲಿಕೆ ಮಾಡಿರುವ ಖರ್ಚನ್ನು ಒಟ್ಟು ಲೆಕ್ಕ ಹಾಕಿದರೆ, ಎಲ್ಲ ರಸ್ತೆಗಳ ಮೇಲ್ಮೈ ನುಣ್ಣಗೆ ಹೊಳೆಯಬೇಕಿತ್ತು.

ಬಿಬಿಎಂಪಿಗೆ ನಿಜಕ್ಕೂ ತನ್ನ ನಗರದ ಮೇಲೆ ಕಾಳಜಿಯಿದ್ದರೆ ರಸ್ತೆ ಗುಂಡಿಗಳಿಂದ ಆಗುತ್ತಿರುವ ಅನಾಹುತಗಳತ್ತ ಒಮ್ಮೆ ಕಣ್ತೆರೆದು ನೋಡಬೇಕು. ಗುಂಡಿಗಳ ಕಾರಣದಿಂದ ಸಂಚಾರದಟ್ಟಣೆ ಉಂಟಾಗಿ ಮಾನವ ಸಂಪನ್ಮೂಲದ ಸಾವಿರಾರು ಗಂಟೆಗಳು ಅನುತ್ಪಾದಕವಾಗಿ ರಸ್ತೆಗಳಲ್ಲೇ ಕಳೆದುಹೋಗುತ್ತಿವೆ. ಪ್ರತೀ ವರ್ಷ ಈ ಗುಂಡಿಗಳು ಸರಾಸರಿ 40 ಬಲಿಗಳನ್ನು ಪಡೆಯುತ್ತಿವೆ. ಬೆನ್ನು ಮುರಿದುಕೊಂಡವರು, ಕತ್ತು ಉಳುಕಿಸಿಕೊಂಡವರು, ಬಿದ್ದು ಪೆಟ್ಟು ಮಾಡಿಕೊಂಡವರು ಸಾವಿರ, ಸಾವಿರ ಸಂಖ್ಯೆಯಲ್ಲಿ ಸಿಗುತ್ತಾರೆ. ಜನರ ನೋವಿಗೂ ಮಿಡಿಯದಷ್ಟು ಅಧಿಕಾರಿಗಳ ಹೃದಯ ಕಲ್ಲಾಗಿ ಹೋಗಿದೆಯೇ? ಗುಂಡಿಗಳು ಮೊದಲು ಇದ್ದುದಕ್ಕಿಂತಲೂ ಅವುಗಳನ್ನು ಮುಚ್ಚಿದ ಸ್ಥಿತಿ ಇನ್ನೂ ಭಯಾನಕ. ರಸ್ತೆಯ ಮೇಲ್ಮೈಗೂ ಮೀರಿದ ಎತ್ತರದಲ್ಲಿ ಮನಬಂದಂತೆ ಟಾರು ಹಾಕಿದ್ದರಿಂದ ಸಣ್ಣ-ಸಣ್ಣ ದಿನ್ನೆಗಳು ನಿರ್ಮಾಣವಾಗಿವೆ. ಅವುಗಳನ್ನು ತಪ್ಪಿಸಿ ವಾಹನ ಓಡಿಸುವುದು ಕೂಡ ಕಷ್ಟವೇ. ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಯ ಪ್ರಕಾರ, ಗುಂಡಿ ಮುಚ್ಚುವಾಗ ಅದನ್ನು ಮೊದಲು ಚೌಕಾಕಾರವಾಗಿ ಕೊರೆದುಕೊಳ್ಳಬೇಕು. ಒಳಗಿನ ದೂಳನ್ನು ತೆಗೆಯಬೇಕು. ರಸ್ತೆ ಮೇಲ್ಮೈಗೆ ಸಮತಟ್ಟಾಗಿರುವಂತೆ ಗುಣಮಟ್ಟದ ಟಾರು ಹಾಕಬೇಕು. ಹೈಕೋರ್ಟ್ನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗುಂಡಿಗಳಿಗೆ ಟಾರು ಚೆಲ್ಲಿ ಹೋಗುತ್ತಿರುವುದು ರಸ್ತೆಯಲ್ಲಿ ಕಾಣುತ್ತಿರುವ ವಿದ್ಯಮಾನ. ಟಾರು ಹಾಕಿದ ರಸ್ತೆ ಹಾಳಾಗದಂತೆ ನೋಡಿಕೊಳ್ಳಲು ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂನಂತಹ ಸರ್ಕಾರಿ ಸಂಸ್ಥೆಗಳ ಮಧ್ಯೆ ಸಮನ್ವಯಕ್ಕೆ ಸಮಿತಿ ರಚಿಸಲಾಗಿದೆ. ರಸ್ತೆ ಅಗೆಯುವ ಸಂಸ್ಥೆಗಳೇ ಕನಿಷ್ಠ ಎರಡು ವರ್ಷ ಆ ರಸ್ತೆಯನ್ನು ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಈ ಕ್ರಮಗಳೆಲ್ಲ ಬರಿ ಕಾಗದದಲ್ಲಿವೆ. ನಗರದ ರಸ್ತೆಗಳನ್ನು ಗುಂಡಿಗಳೇ ಇಲ್ಲದಂತೆ ನಿರ್ವಹಣೆ ಮಾಡಲು ನಾಲ್ಕು ಟಾರು ಘಟಕ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದ ಬಿಬಿಎಂಪಿ, ತಾನೇ ಘಟಕ ಹಾಕಿಬಿಟ್ಟರೆ ‘ಗುತ್ತಿಗೆದಾರರ ಗತಿಯೇನು’ ಎಂದು ಕಳವಳಗೊಂಡು ಆ ನಿರ್ಧಾರದಿಂದಲೇ ಹಿಂದೆ ಸರಿದಿದೆ. ‘ಸದ್ಯದ ನಿಮ್ಮ ತೇಪೆ ಕೆಲಸದಿಂದ ಬೀಗಬೇಡಿ. ತೇಪೆ ಹಚ್ಚುವುದೇ ನಿಮ್ಮ ಕೆಲಸವಲ್ಲ. ಗುಂಡಿಗಳೇ ಬೀಳದಂತೆ ಗುಣಮಟ್ಟದ ರಸ್ತೆಗಳು ನಗರದಲ್ಲಿ ನಿರ್ಮಾಣವಾಗಬೇಕು’ ಎಂದು ಹೈಕೋರ್ಟ್ ಕುಟುಕಿದೆ. ಕೆಲಸ ಆಗಿಲ್ಲವೆಂದು ಜನ ಕೋರ್ಟ್ ಮೆಟ್ಟಿಲೇರದಂತೆ ನೋಡಿಕೊಳ್ಳುವ ಮೂಲಕ ವಿಶ್ವಾಸಾರ್ಹತೆ ವೃದ್ಧಿಸಿಕೊಳ್ಳಿ ಎಂಬ ಕಿವಿಮಾತನ್ನೂ ಹೇಳಿದೆ. ರಸ್ತೆಗಳ ನಿರ್ವಹಣೆ ಹೇಗೆ ಮಾಡುತ್ತದೆ ಎನ್ನುವುದು ಸದ್ಯ ಪಾಲಿಕೆಯ ವಿಶ್ವಾಸಾರ್ಹತೆಗೆ ಎದುರಾಗಿರುವ ದೊಡ್ಡ ಪರೀಕ್ಷೆಯಾಗಿದೆ.
Friends, If you like this post,kindly comment below the post and do share your
Response,
(Thanks for Reading....)
No comments:
Post a Comment