Krishna Yadav. Powered by Blogger.

Saturday, 5 December 2015

ಮೋಹಕ ಬಲೆಯ ಮಾಂಸಾಹಾರಿಸಸ್ಯಗಳು

ಸಸ್ಯಗಳನ್ನು ಕೀಟಗಳು ತಿನ್ನುವುದನ್ನು, ಹೂವಿನ ಮಕರಂದವನ್ನು ದುಂಬಿ ಹೀರುವುದನ್ನು ನೋಡಿದ್ದೇವೆ. ತಮ್ಮ ಬೇರುಗಳ ಮೂಲಕ ಮಣ್ಣಿನಲ್ಲಿಯ ಪೋಷಕಾಂಶಗಳು, ನೀರು ಪಡೆದು ಸಸ್ಯಗಳು ಬೆಳೆಯುತ್ತವೆ ಎನ್ನುವುದು ಕೂಡ ಹೊಸ ಸಂಗತಿಯೇನಲ್ಲ. ಕುಂಡ, ಕೈತೋಟ, ಗದ್ದೆ, ತೋಟಗಳಲ್ಲಿ ಗಿಡಗಳು ಬಾಡಲಾರಂಭಿಸಿದಾಗ ಯಥೇಚ್ಛ ಗೊಬ್ಬರ, ನೀರು ಒದಗಿಸಿ, ಬೆಳವಣಿಗೆಗೆ ಪೂರಕ ಕ್ರಮಗಳನ್ನು ಕೈಗೊಳ್ಳುವುದನ್ನೂ ನೋಡಿದ್ದೇವೆ. ಆದರೆ ತಮ್ಮನ್ನು ತಿನ್ನಲು ಬರುವ, ಆಶ್ರಯ ಬಯಸಿ ಬರುವ ಕೀಟ, ಚಿಟ್ಟೆ, ದೊಡ್ಡ ದುಂಬಿ, ಕಪ್ಪೆ ಮರಿಗಳು ಇಂಥ ಪುಟ್ಟ ಜೀವಿಗಳನ್ನೇ ಸ್ವಾಹಾ ಮಾಡುವ ಸಸ್ಯಗಳಿವೆ ಎನ್ನುವುದು ಗೊತ್ತಾ? ಹೌದು, ಅಂಥ ‘ಮಾಂಸಾಹಾರಿ ಸಸ್ಯ’ಗಳೂ ನಮ್ಮ ಭೂಮಿ ಮೇಲಿವೆ, ‘ಸೈಲೆಂಟ್ ಕಿಲ್ಲರ್’ ಥರ. ಸೃಷ್ಟಿ ವೈಚಿತ್ರ್ಯ ಗಣಿಯಲ್ಲಿನ ವಿಶೇಷದ ಪಟ್ಟಿಗೆ ಈ ಮಾಂಸಾಹಾರಿ ಸಸ್ಯಗಳು ಸೇರಿವೆ.
ಈ ಗಿಡಗಳೆಲ್ಲ ಕೀಟಗಳನ್ನು ಹೇಗೆ ಆಕರ್ಷಿಸುತ್ತ್ತವೆ, ಕೀಟಗಳೂ ಇವುಗಳ ಆಕರ್ಷಣೆಗೆ ಹೇಗೆ ಬಲಿಯಾಗುತ್ತವೆ ಎಂಬ ಕುತೂಹಲದ ಮಾಹಿತಿ ನಿಮಗಾಗಿ.
ಅದೊಂದು ಸಸ್ಯದಲ್ಲಿ ಸುಂದರವಾದ ಹೂವೊಂದು ಅರಳಿದೆ. ಮಕರಂದವನ್ನರಸಿ ಹಾರಿಕೊಂಡು ಬಂದ ದುಂಬಿಯೊಂದು ರೆಕ್ಕೆಗಳನ್ನು ಮಡಚುತ್ತ ಆ ಹೂವಿನ ಮೇಲೆ ಕುಳಿತುಕೊಳ್ಳಲು ಕಾಲುಗಳನ್ನು ಊರುತ್ತದೆ. ಇನ್ನೇನು ಹೀರಬೇಕು ಎನ್ನುವಷ್ಟರಲ್ಲಿ ಅದರ ಒದ್ದಾಟ, ಯಾರಿಗೂ ಕೇಳದ ಸಾವಿನ ಅರ್ತನಾದ... ಕ್ಷಣ ಉರುಳುತ್ತಿದ್ದಂತೆ ಆ ದುಂಬಿ ಇನ್ನಿಲ್ಲವಾಗುತ್ತದೆ. ಇದೇನು? ಹೂವಿನಿಂದ ದುಂಬಿಯ ಪ್ರಾಣ ಹೊರಟುಹೋಯಿತೆ ಎಂದಿರಾ? ನಿಜವೇ. ಹಲವು ಸಸ್ಯಗಳು ಕೀಟಗಳು, ಪುಟ್ಟ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಇವನ್ನು ಮಾಂಸಾಹಾರಿ (Carnivorous plants) ಅಥವಾ ಕೀಟಭಕ್ಷಕ ಸಸ್ಯಗಳು ಎಂದು ಕರೆಯಲಾಗುತ್ತದೆ. ವಿಶ್ವದಲ್ಲಿ 580ಕ್ಕೂ ಹೆಚ್ಚು ಪ್ರಭೇದದ ಮಾಂಸಾಹಾರಿ ಸಸ್ಯಗಳಿವೆ. ಭಾರತದಲ್ಲಿ 50ಕ್ಕೂ ಹೆಚ್ಚು ವಿಧವಾದ ಇಂತಹ ಸಸ್ಯಗಳಿವೆ.
ಬೇಟೆಯ ಮಾಯಾ ಲೋಕ
ಈ ಮಾಂಸಾಹಾರಿ ಸಸ್ಯಗಳು ಕೀಟಗಳನ್ನು ತಮ್ಮ ಬಲೆಗೆ ಬೀಳಿಸುವ ರೀತಿ ಒಂದಕ್ಕಿಂತ ಒಂದು ಭಿನ್ನ. ತಾವು ಮಣ್ಣಿನಲ್ಲಿ ನೆಲೆಯೂರಿದ ಸ್ಥಳದಿಂದಲೇ ಕೀಟಗಳನ್ನು ಆಕರ್ಷಿಸಿ ಶಿಕಾರಿ ನಡೆಸುತ್ತವೆ. ಸೌಂದರ್ಯ, ಕುತೂಹಲ, ಆಹಾರದ ಆಸೆಯಿಂದ ಇವನ್ನು ಸ್ಪರ್ಷಿಸಿದ ಕೀಟಗಳು ಅರಿಯದೇ ಮೋಸದ ಬಲೆಗೆ ಬಿದ್ದು ಬಲಿಯಾಗುತ್ತವೆ. ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಇಂಥ ಮಾಂಸಾಹಾರಿ ಸಸ್ಯಗಳ ಕುರಿತು 1875ರಲ್ಲೇ ಕೃತಿ ರಚಿಸಿದ್ದರು. ಕೆಲವು ಲೋಟದಂತಹ ಆಕೃತಿಯ ಹಸಿರು ತಟ್ಟೆಯಲ್ಲಿ ಕೀಟಗಳನ್ನು ತಮ್ಮ ಬಲೆಗೆ ಬೀಳಿಸಿ ಶಿಕಾರಿ ಪಡೆಯುತ್ತವೆ.
ಇನ್ನು ಕೆಲವು ಅದೇ ರೀತಿಯ ಕೊಳವೆ/ತಂಬಿಗೆ/ಹೂಜಿ ರೀತಿಯ ಶಿಕಾರಿಬಟ್ಟಲ ಅಂಗವನ್ನು ಹೊಂದಿವೆ. ಈ ಅಂಗ ಬಲೂನ್ ರೀತಿಯ ತೆಳು ಅಂಗರಚನೆ ಪಡೆದಿದೆ. ಕೆಲವು ಸಸ್ಯಗಳ ಇಂಥ ಊಟದ ಬಲೆಬಟ್ಟಲು ನೈಸರ್ಗಿಕ ಹಸಿರಿನಿಂದ ಕೂಡಿದ್ದರೆ, ಕೆಲವು ನೇರಳೆ, ಕೆಂಪು, ಹಸಿರು-ಕೆಂಪು, ಇತರ ಬಣ್ಣಗಳನ್ನು ಹೊಂದಿರುತ್ತವೆ. ಕೆಲವು ಬಲೆಬಟ್ಟಲ ಮೇಲ್ಭಾಗದಲ್ಲಿ ಒನಪಿನ ಮುಚ್ಚಳವಿದ್ದು, ಅದು ಅರೆ ತೆರೆದಿರುತ್ತದೆ. ಇಂತಹ ಆಹಾರದ ಬಟ್ಟಲಿಗೆ ಕೀಟಗಳು, ಕಪ್ಪೆ, ಚಿಟ್ಟೆ, ದುಂಬಿ, ಪುಟ್ಟ ಪ್ರಾಣಿಗಳು ಕುತೂಹಲದಿಂದ ಇಣುಕಿ ನೋಡಲು ಹೋಗಿ ಬಿದ್ದುಬಿಡುತ್ತವೆ. ಒಮ್ಮೆ ಬಲಿಕೀಟ ಈ ಬಟ್ಟಲಿನ ಗುಂಡಿಗೆ ಬಿತ್ತೆಂದರೆ ಮೇಲೆ ಬರಲು ಸಾಧ್ಯವಾಗದು. ಅದರ ದೇಹಕ್ಕೆ ಹೋಲಿಸಿದರೆ ಬಟ್ಟಲು ಆಳವಾಗಿರುತ್ತದೆ, ಮೇಲಕ್ಕೆ ಹತ್ತಿ ಬಂದು ಹಾರಿಹೋಗಲು ಸಾಧ್ಯವಿಲ್ಲ. ಬಲೆಬಟ್ಟಲಿಗೆ ಶಿಕಾರಿಯು ಬಿದ್ದ ಕೂಡಲೇ ಸಸ್ಯವು ಆ ಬಟ್ಟಲ ಕೆಳತುದಿಯ ಮೂಲಕ ಕೀಟವನ್ನು ಜೀರ್ಣಿಸಿಕೊಳ್ಳಲು ಆರಂಭಿಸಿಬಿಡುತ್ತದೆ.
ವೈವಿಧ್ಯಮಯ ಪ್ರಪಂಚ
ಕೀಟಭಕ್ಷಕ ಅಥವಾ ಮಾಂಸಾಹಾರಿ ಸಸ್ಯಗಳನ್ನು ಅವು ಶಿಕಾರಿ ಹಿಡಿಯುವ ಪರಿಗೆ ಅನುಸಾರವಾಗಿ ಐದು ರೀತಿಯಲ್ಲಿ ವಿಂಗಡಿಸಲಾಗಿದೆ. ಕೊಳವೆ/ತಂಬಿಗೆ/ಹೂಜಿ ಆಕಾರದ ಗುಳಿಯ(ಬಟ್ಟಲಿನ) ಸಸ್ಯಗಳು. ಇಂಗ್ಲಿಷಿನಲ್ಲಿ ಇವನ್ನು Pitfall traps ಎನ್ನುತ್ತಾರೆ. ಇವುಗಳ ಹಲವು ಪ್ರಭೇದಗಳನ್ನು ‘ಮಂಗನ ತಟ್ಟೆ’ಗಳೆಂದು ಕರೆಯುತ್ತಾರೆ.